ಮುಖ್ಯಮಂತ್ರಿಗಳಿಂದ ವಿಡಿಯೋ ಸಂವಾದ
ಮಳೆ ಹಿನ್ನೆಲೆ ಸಾಕಷ್ಟು
ಮುಂಜಾಗ್ರತೆಗೆ ಒತ್ತು: ರಾಮಚಂದ್ರನ್
ಆರ್....
ಬೀದರ ಅಕ್ಟೋಬರ್ 16 (ಕರ್ನಾಟಕ ವಾರ್ತೆ) ಬೀದರ ಜಿಲ್ಲೆಯಲ್ಲಿ ವ್ಯಾಪಕ
ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾ ಪೊಲೀಸ್, ಜಿಲ್ಲಾ ಪಂಚಾಯತ್
ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಾಕಷ್ಟು ಮುಂಜಾಗ್ರತಾ
ಕ್ರಮಗಳನ್ನು ವಹಿಸಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಅವರು ಮಾಹಿತಿ ನೀಡಿದರು.
ಅಕ್ಟೋಬರ್ 16ರಂದು ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ
ಸಂವಾದದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ
ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಸಹಾಯಕ ಆಯುಕ್ತರು
ಹಾಗೂ ಎಲ್ಲ ತಹಸೀಲ್ದಾರ ಅವರೊಂದಿಗೆ ಭಾಗಿಯಾದ ಜಿಲ್ಲಾಧಿಕಾರಿಗಳು, ಬೀದರ
ಜಿಲ್ಲೆಯಲ್ಲಿ ಮಳೆಯಿಂದಾದ ಜೀವಹಾನಿ, ಬೆಳೆಹಾನಿ ಸೇರಿದಂತೆ ಹಲವಾರು ಮಾಹಿತಿಯನ್ನು
ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಬೀದರ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ.101ರಷ್ಟು ಹೆಚ್ಚಿಗೆ
ಮಳೆ ಸುರಿದಿದೆ. ಕಾರಂಜಾ, ಮುಲ್ಲಾಮಾರಿ, ಚುಳುಕಿನಾಲಾ ಡ್ಯಾಮಗಳು ಈಗಾಗಲೇ
ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಮಾಂಜ್ರಾ ನಂದಿಯಿಂದ ನೀರು ಬಿಡುಗಡೆ
ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಇದುವರೆಗೆ ಘಟಿಸಿದ 9 ಜೀವಹಾನಿ ಪ್ರಕರಣಗಳಿಗೆ ತಲಾ 5
ಲಕ್ಷ ರೂ.ದಂತೆ 45 ಲಕ್ಷ ರೂ. ಗಳನ್ನು ಸಂಬಂಧಿಸಿದವರ ಬ್ಯಾಂಕ್ ಖಾತೆಗಳಿಗೆ
ಜಮೆ ಮಾಡಲಾಗಿದೆ. 63 ಜಾನುವಾರು ಹಾನಿ ಪ್ರಕರಣಗಳಲ್ಲಿ ಸಂಬಂಧಪಟ್ಟ
ಮಾಲೀಕರ ಖಾತೆಗಳಿಗೆ ಪರಿಹಾರ ನೀಡಲಾಗುತ್ತಿದೆ.
ಮನೆಗಳು ಸಂಪೂರ್ಣ ಹಾನಿಯಾಗಿರುವುದು ಇದುವರೆಗೆ
ವರದಿಯಾಗಿರುವುದಿಲ್ಲ. ಆದರೆ, 1670 ಮನೆಗಳು ಭಾಗಶಃ ಹಾನಿಯಾಗಿರುವ
ಮಾಹಿತಿ ಇದೆ. ಮಳೆಯಿಂದಾಗಿ ಜಿಲ್ಲೆಯಲ್ಲಿನ 38 ಸೇತುವೆಗಳಿಗೆ ಹಾನಿಯಾಗಿರುವುದು
ಗಮನಕ್ಕೆ ಬಂದಿದೆ. ಕೆಲ ಕಡೆಗಳಲ್ಲಿ ರಸ್ತೆ ಸಂಚಾರ ಬಂದ್ ಆಗಿರುವುದರಿಂದ
ಜನರು ಬೇರೆ ಮಾರ್ಗದ ಮೂಲಕ ಸಂಚರಿಸುತ್ತಿದ್ದು, ಕೆಟ್ಟು ಹೋದ.......
ರಸ್ತೆಗಳನ್ನು ಬೇಗ ದುರಸ್ತಿ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿಗಳು
ತಿಳಿಸಿದರು. ಸುಮಾರು 26 ಕಿ.ಮೀನಷ್ಟು ರಸ್ತೆಗಳು ಸಂಪೂರ್ಣ
ಹಾನಿಯಾಗಿರುವುದು ವರದಿಯಾಗಿದೆ ಎಂದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸಾಕಷ್ಟು
ಹಾನಿಯಾಗಿದೆ. 40,000 ಹೆಕ್ಟೇರ್‍ನಷ್ಟು ಸೋಯಾ ಬೆಳೆ, 20,000 ಹೆಕ್ಟೇರ್‍ನಷ್ಟು
ತೊಗರಿ, 10,000 ಹೆಕ್ಟೇರ್‍ನಷ್ಟು ಕಬ್ಬು, 500 ಹೆಕ್ಟೇರ್‍ನಷ್ಟು ಉದ್ದು
ಹಾನಿಯಾಗಿದೆ. ಅಲ್ಲದೇ ತೋಟಗಾರಿಕಾ ಬೆಳೆಗಳಾದ ಟೊಮಾಟೋ, ಶುಂಠಿ ಮತ್ತು
ಮೆಣಸಿನಕಾಯಿ ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯಿಂದಾಗಿ
ಜಿಲ್ಲೆಯಲ್ಲಿ ಇದುವರೆಗೆ ಎರಡೂವರೆ ಲಕ್ಷ ಹೆಕ್ಟೇರ್‍ನಲ್ಲಿ ಆಗಿರುವ ಬೆಳೆಹಾನಿಯ
ಮಾಹಿತಿಯನ್ನು ಪರಿಹಾರ ಪೋರ್ಟಲನಲ್ಲಿ ದಾಖಲಿಸುತ್ತಿರುವುದಾಗಿ ಜಿಲ್ಲಾಧಿಕಾರಿಗಳು
ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತರಾದ
ಗರೀಮಾ ಪನ್ವಾರ್ ಹಾಗೂ ಇತರರು ಇದ್ದರು.

No comments:
Post a Comment