ಜಿಲ್ಲಾಧಿಕಾರಿಗಳಿಂದ ವಿಪತ್ತು ನಿರ್ವಹಣಾ ಸಮಿತಿ ಸಭೆ
ಮನೆಹಾನಿ: ಸಮರ್ಪಕ ಪರಿಹಾರಕ್ಕೆ
ಕ್ರಮವಹಿಸಲು ಸೂಚನೆ..
ಬೀದರ ಅಕ್ಟೋಬರ್ 16 (ಕರ್ನಾಟಕ ವಾರ್ತೆ) ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ
ಹೆಚ್ಚಿನ ಮಳೆಯಿಂದಾಗಿ ಮನೆ ಹಾನಿ ಆಗಿರುವುದರಿಂದ ಕೂಡಲೇ ವರದಿ ಸಲ್ಲಿಸಿ
ಪರಿಹಾರ ಬಿಡುಗಡೆಗೆ ಎಲ್ಲಾ ತಾಲೂಕಿನ ತಹಸೀಲ್ದಾರಗಳು ಕ್ರಮ
ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು
ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 16 ರಂದು ವಿಪತ್ತು
ನಿರ್ವಹಣಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸತತ ಮಳೆ
ಸುರಿದಿದ್ದರಿಂದ ಕೆಲವು ತಾಲೂಕುಗಳಲ್ಲಿ ಕೆಲವು ಮನೆಗಳಿಗೆ ನೀರು
ನುಗ್ಗಿದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ
ತೊಂದರೆಯಾಗದಂತೆ ನೋಡಿಕೊಳ್ಳಲು ಮೊದಲಾದ್ಯತೆ ನೀಡಬೇಕು
ಎಂದು ತಿಳಿಸಿದರು.
ತುರ್ತು ನಿರ್ವಹಣೆಗೆ ಅಗತ್ಯ ಯಂತ್ರೋಪಕರಣ ಸಾಮಗ್ರಿಗಳು
ಮತ್ತು ರಬ್ಬರ ಬೋರ್ಡಗಳನ್ನು ಖರೀದಿಸಲು ವಿಪತ್ತು ನಿರ್ವಹಣಾ
ನಿಧಿಯಿಂದ ಅಗತ್ಯ ಕ್ರಮಕೈಗೊಳ್ಳಲು ಇದೆ ವೇಳೆ ಜಿಲ್ಲಾಧಿಕಾರಿಗಳು
ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಮಣ್ಣು ತೇವಗೊಂಡು ವಿದ್ಯುತ್ ಕಂಬಗಳು
ಉರುಳುವ ಸಾಧ್ಯತೆ ಇರುತ್ತದೆ. ವಿದ್ಯುತ್ ತಂತಿಯನ್ನು ತುಳಿದು
ಜನಜಾನುವಾರು ಜೀವಹಾನಿಯಾಗುವ ಸಂಭವವೂ ಇರುತ್ತದೆ. ಮಳೆಗಾಳಿಗೆ
ಗಿಡಗಳು ವಿದ್ಯುತ್ ತಂತಿಯ ಮೇಲೆ ಉರುಳಿ ವಿದ್ಯುತ್ ವ್ಯತ್ಯಯದಂತಹ
ಸಮಸ್ಯೆಗಳು ಕೂಡ ತಲೆದೋರುತ್ತವೆ. ಈ ಬಗ್ಗೆ ತಾವು ಗಮನ ಹರಿಸಿ
ಜನರಿಗೆ ತೊಂದರೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಚ್ಚಿನ
ಗಮನ ಕೊಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜೆಸ್ಕಾಂ
ಅಭಿಯಂತರರಿಗೆ ಸೂಚಿಸಿದರು. ಸಭೆಯಲ್ಲಿ ಸೂಚನೆ ನೀಡಿದಾಗ್ಯೂ
ತಾವುಗಳು ನಿರ್ಲಕ್ಷ್ಯ ವಹಿಸಿ ವಿದ್ಯುತ್ ಅವಘಡಗಳು ಸಂಭವಿಸುವುದು.....
ಕಂಡುಬಂದಲ್ಲಿ ತಮ್ಮನ್ನೇ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು
ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜೆಸ್ಕಾಂ ಅಭಿಯಂತರರಿಗೆ ಎಚ್ಚರಿಕೆ
ನೀಡಿದರು.
ಚಿಟಗುಪ್ಪ ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ನೀರು ಬಂದು
ತೊಂದರೆಯಾಗಿದೆ ಎಂದು ಇದೆ ವೇಳೆ ಚಿಟಗುಪ್ಪ ತಹಸೀಲ್ದಾರ ಅವರು
ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ
ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಿ.ಎಲ್.ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ
ಆಯುಕ್ತರಾದ ಗರೀಮಾ ಪನ್ವಾರ್, ನಗರಾಭಿವೃದ್ಧಿ ಕೋಶದ ಯೋಜನಾ
ನಿರ್ದೇಶಕರಾದ ಶರಣಬಸಪ್ಪ ಕೊಟೆಪ್ಪಗೋಳ, ತಹಸೀಲ್ದಾರರಾದ
ಗಂಗಾದೇವಿ, ಚಂದ್ರಶೇಖರ ಸಿ.ಎಚ್. ಸಾವಿತ್ರಿ ಸಲಗರ, ನಾಗಯ್ಯ ಹಿರೇಮಠ,
ಅಣ್ಣಾರಾವ್ ಪಾಟೀಲ ಹಾಗೂ ಇತರರು, ಮತ್ತು ಕೃಷಿ ಇಲಾಖೆ, ತೋಟಗಾರಿಕಾ
ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



No comments:
Post a Comment