ಉಚಿತ ಪ್ರವೇಶ ಯೋಜನೆಯಡಿ 665
ಸೀಟುಗಳ ಆಯ್ಕೆ: ರಾಮಚಂದ್ರನ್ ಆರ್
ಬೀದರ ಸೆಪ್ಟೆಂಬರ್ 11 (ಕ.ವಾ):-ಜಿಲ್ಲಾಡಳಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರ ಮತ್ತು ಬೀದರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಯೋಗದೊಂದಿಗೆ 2020-21ನೇ ಸಾಲಿಗಾಗಿ ಉಚಿತ ಪ್ರವೇಶ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಜಿಲ್ಲೆಯ ಪ್ರತಿಭಾವಂತ ಬಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀದರ ಜಿಲ್ಲೆಯ ಅನುದಾನಿತ ಹಾಗೂ ಅನುದಾನ ರಹಿತ ಪಿ.ಯು.ಸಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡೂ ವರ್ಷಗಳಿಗೂ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಕೌನ್ಸೆಲಿಂಗನಲ್ಲಿ ಭಾಗವಹಿಸಿದ 1276 ವಿದ್ಯಾರ್ಥಿಗಳಲ್ಲಿ 675 ಸರ್ಕಾರಿ ಹಾಗೂ 601 ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಇರುತ್ತಾರೆ. ಬೀದರ ಜಿಲ್ಲೆಯಲ್ಲಿ 63 ಕಾಲೇಜಿನವರು 803 ಉಚಿತ ಪಿ.ಯು.ಸಿ. ಸೀಟುಗಳನ್ನು ನೀಡಿರುತ್ತಾರೆ. ಇದರಲ್ಲಿ 360 ಬಾಲಕೀಯರು 305 ಬಾಲಕರು ಸೇರಿ ಒಟ್ಟು 665 ಸೀಟುಗಳ್ನು ವಿದ್ಯಾರ್ಥಿಗಳು ಉಚಿತವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇದರಲ್ಲಿ 300 ವಿದ್ಯಾರ್ಥಿಗಳು ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳಾಗಿರುತ್ತಾರೆ.
ಡಾ.ಪಿ.ಸಿ.ಜಾಫರ್ ಅವರ ಅವಧಿಯಲ್ಲಿ ಆರಂಭ: ಡಾ.ಪಿ.ಸಿ.ಜಾಫರ್ ಅವರು ಬೀದರನಲ್ಲಿ ಜಿಲ್ಲಾಧಿಕಾರಿಗಳಾಗಿದ್ದಾಗ ಬಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜಿಲ್ಲೆಯ ಅನುದಾನಿತ ಹಾಗೂ ಅನುದಾನ ರಹಿತ ಪಿ.ಯು.ಸಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡೂ ವರ್ಷಗಳಿಗೂ ಉಚಿತ ಪ್ರವೇಶಾವಕಾಶ ಯೋಜನೆಯನ್ನು ಆರಂಭಿಸಿದ್ದರು. ಸದರಿ ಈ ಯೋಜನೆಯಿಂದ ಜಿಲ್ಲೆಯ ಸಾವಿರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಡಾ.ಪಿ.ಸಿ.ಜಾಫರ್ ಅವರ ಕಾರ್ಯ ಯೋಜನೆಯನ್ನು ಇದೆ ವೇಳೆಯಲ್ಲಿ ಸ್ಮರಿಸಿದ್ದಾರೆ.





No comments:
Post a Comment