ಕಮಠಾಣಾ: ನಿರಂತರ ಮಳೆಯಿಂದಾಗಿ ಬೆಳೆ ಹಾನಿ; ಪರಿಶೀಲನೆ ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್.
ಬೀದರ್ (ಅಕ್ಟೋಬರ್ 14): ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತಾಲೂಕಿನ ಕಮಠಾಣಾ ಬಳಿಯ ಹಳ್ಳ ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಲ್ಲಿ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಗಿಡಾಗಿದ್ದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆಯಾಗುತ್ತಿದೆ. ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಈ ಭಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆದರೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೆಸರು, ಉದ್ದು, ತೊಗರಿ, ಕಬ್ಬು ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ.
ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಈ ಹಿಂದೆ ಕೂಡ ಒತ್ತಾಯ ಮಾಡಿದ್ದೇನೆ. ಈಗಲೂ ಒತ್ತಾಯ ಮಾಡುತ್ತೇನೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಮಠಾಣಾ ಗ್ರಾಮದ ಗ್ರಾಮಸ್ಥರು, ರೈತರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.








No comments:
Post a Comment